ಬ್ರೆಟನ್‍ವುಡ್ಸ್ ಸಮ್ಮೇಳನ

ಎರಡನೆಯ ಮಹಾಯುದ್ಧದ ಅನಂತರ ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆ ಕುರಿತು ಚರ್ಚೆಮಾಡಲು ಅಮೆರಿಕಾ ಸಂಯುಕ್ತ ಸಂಸ್ಥಾನದ ನ್ಯೂ ಹ್ಯಾಂಪ್‍ಪೈರಿನ ಬ್ರೆಟನ್ ವುಡ್ಸ್‍ನಲ್ಲಿ 1944ರಲ್ಲಿ ಸೇರಿದ್ದ ಒಂದು ಅಂತಾರಾಷ್ಟ್ರೀಯ ಸಮ್ಮೇಳನ. ಈ ಸಮ್ಮೇಳನದ ಫಲವಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐ.ಎಮ್.ಎಫ್) ಮತ್ತು ವಿಶ್ವ ಬ್ಯಾಂಕಿನ ಉಗಮವಾಯಿತು.

	ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ನಿರ್ಬಂಧ ಉಂಟುಮಾಡುವ ಅನೇಕ ಬಗೆಯ ವಿನಿಮಯ ದರದ ವ್ಯವಸ್ಥೆ (ಮಲ್ಟಿಪಲ್ ಎಕ್ಸ್‍ಚೇಂಜ್ ರೇಟ್ಸ್), ರಾಷ್ಟ್ರ-ರಾಷ್ಟ್ರಗಳ ನಡುವಣ ದ್ವಿಪಕ್ಷಿಯ ವ್ಯಾಪಾರ ಒಪ್ಪಂದದ ವ್ಯವಸ್ಥೆ ಮತ್ತು ವಿನಿಮಯ ದರಗಳ ನಿರ್ಬಂಧ ಕ್ರಮಗಳನ್ನು ಕುರಿತು ಈ ಸಮ್ಮೇಳನದಲ್ಲಿ ಚರ್ಚಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ವ್ಯವಸ್ಥೆ ಸುಗಮವಾಗಬೇಕೆಂಬುದೇ ಚರ್ಚೆಯ ಮುಖ್ಯ ತೀರ್ಮಾನವಾಗಿತ್ತು. ಸುಗಮ ವ್ಯವಸ್ಥೆ ಜಾರಿಗೆ ಬರಬೇಕಾದರೆ, ದೃಢನಿಯಮ ದರಗಳು ಅಸ್ತಿತ್ವಕ್ಕೆ ಬರಬೇಕು ಮತ್ತು ರಾಷ್ಟ್ರ ರಾಷ್ಟ್ರಗಳ ಹಣ ಪರಸ್ಪರ ಪರಿವರ್ತನೀಯವಾಗಿರಬೇಕು ಎಂಬ ಅಂಶಗಳನ್ನು ಮನಗಾಣಲಾಯಿತು. ಜೊತೆಯಲ್ಲಿಯೇ ಸುವರ್ಣ ವಿನಿಯಮ ಪ್ರಮಿತಿಯ ನಿರ್ಬಂಧಗಳಿಲ್ಲದೇ ವಿನಿಮಯ ಲಾಭಗಳನ್ನು ಪಡೆದುಕೊಳ್ಳುವ ಮಾರ್ಗವನ್ನು ಅನ್ವೇಷಿಸಬೇಕೆಂಬ ತೀರ್ಮಾನಕ್ಕೂ ಬರಲಾಯಿತು.

	ಈ ಸಮ್ಮೇಳನಕ್ಕೆ ಮೊದಲೇ ಕೇನ್ಸನ ನೇತೃತ್ವದಲ್ಲಿ ಬ್ರಿಟನ್ ಮತ್ತು ವೈಟ್‍ನ ನೇತೃತ್ವದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಒಂದೊಂದು ಯೋಜನೆಯನ್ನು ತಯಾರಿಸಿದ್ದುವು. ಇವೆರಡೂ ಯೋಜನೆಗಳಲ್ಲಿ ಕೆಲವು ಮುಖ್ಯವಾದ ವ್ಯತ್ಯಾಸಗಳೂ ಹಾಗೇ ಅನೇಕ ವಿಷಯಗಳಲ್ಲಿ ಸಾಮ್ಯಗಳೂ ಇದ್ದುವು. ಇವೆರಡೂ ರಾಷ್ಟ್ರಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಒಂದು ಒಪ್ಪಂದಕ್ಕೆ ಬಂದರು. ಅದರಂತೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮತ್ತು ವಿಶ್ವಬ್ಯಾಂಕ್ ಅಸ್ತಿತ್ತ್ವಕ್ಕೆ ಬಂದುವು. ಇದು ಅಂತಾರಾಷ್ಟ್ರೀಯ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಒಂದು ಯುಕ್ತ ಪರಿಹಾರವೆನ್ನಬಹುದು. ಅದರಲ್ಲೂ ಅಭಿವೃದ್ಧಿ ಶೀಲ ರಾಷ್ಟ್ರಗಳು ತಮ್ಮ ಲೇಣಿ, ದೇಣಿ ತಃಖ್ತೆಯ ಅಸಮತೋಲನವನ್ನು ಹೋಗಲಾಡಿಸಿಕೊಳ್ಳಲು ಹಾಗೂ ಅನಿರ್ಬಂಧಿತ ವ್ಯಾಪಾರಕ್ಕೆ ತಾತ್ಕಲಿಕವಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ದೊರಕಿಸಿ ಕೊಡುತ್ತಿರುವ ಸಹಾಯ ಬಲು ಉಪಯುಕ್ತವಾಗಿದೆ. ಹಾಗೆಯೇ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನಾನಾ ರೀತಿಯ ಹಣಕಾಸು ಸಹಾಯವನ್ನು ದೊರಕಿಸಿಕೊಡುವುದರಲ್ಲಿ ಮತ್ತು ಆ ರಾಷ್ಟ್ರಗಳಲ್ಲಿ ಹಣ ಹೂಡಿಕೆಯ ಪ್ರಮಾಣ ಹೆಚ್ಚಾಗಿ ಆರ್ಥಿಕ ಬೆಳವಣಿಗೆಯಾಗುವುದಕ್ಕೆ ವಿಶ್ವಬ್ಯಾಂಕ್ ಶ್ರಮಿಸುತ್ತಿದೆ.
(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ